ಕನಸೆಂಬೋ ಕುದುರೆಯ ಬೆನ್ನೇರಿ

Standard

ವರ್ಷದಿಂದೀಚೆ ಖಾಸಗಿ ವಾಹಿನಿಯೊಂದರಲ್ಲಿ ಇಮೋಷನಲ್ ಅತ್ಯಾಚಾರ್ (ಭಾವನಾತ್ಮಕ ಅತ್ಯಾಚಾರ) ಎಂಬ ರಿಯಾಲಿಟಿ ಶೋ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ನಿಮಗೆ ನಿಮ್ಮ ಪ್ರಿಯಕರ/ಪ್ರಿಯತಮೆಯಲ್ಲಿ ನಂಬಿಕೆ ಹೊರಟು ಹೋಗಿದ್ದರೆ, ಅನುಮಾನ ಹುಟ್ಟಿಕೊಂಡಿದ್ದರೆ, ಈ ಚಾನೆಲ್ ನವರು ನಿಮ್ಮ ಸಹಾಯಕ್ಕೆ ದೌಡಾಯಿಸಿಬರುತ್ತಾರೆ.  ಇದರಿಂದ ನಿಮಗೆರಡು ಲಾಭ; ಒಂದು , ನಿಮ್ಮ ಸಂಗಾತಿಯ ನಿಷ್ಠೆ ಯ ನೈಜತೆ ಇಡೀ ಜಗತ್ತಿನ ಮುಂದೆ ಬಯಲಾಗುತ್ತದೆ. ಎರಡು ಪುಕಸಟ್ಟೆಯಾಗಿ ಒಂದರ್ಧ ಗಂಟೆ ಟಿ.ವಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತೀರಿ. ಒಪ್ಪಿಕೊಂಡ ಸಂಗಾತಿಯನ್ನೇ ಸಾರ್ವಜನಿಕವಾಗಿ ಅಗ್ನಿ ಪರೀಕ್ಷೆಗೊಳಪಡಿಸುವ ನಿಮ್ಮ ನಿಷ್ಠೆಯನ್ನ ಚಾನೆಲ್ ನವರು ತಪ್ಪಿಯೂ ಪ್ರಶ್ನಿಸುವುದಿಲ್ಲ. ಅವರ ಮಟ್ಟಿಗೆ ನೀವು ಮರ್ಯಾದ ಪುರುಷೋತ್ತಮ ರಾಮನೋ, ಸತಿ ಸಾವಿತ್ರಿಯೋ ಆಗಿರುತ್ತೀರಿ.

ಈ ಕಾರ್ಯಕ್ರಮದ ಜನಪ್ರಿಯತೆ ಯಾವ ಅತಿರೇಕಕ್ಕೆ ಹೋಗಿದೆಯೆಂದರೆ, ಇನ್ನೊಂದು ಚಾನೆಲ್ ನವರು ಎಕ್ಸ್ ಯುವರ್ ಎಕ್ಸ್ (ಮಾಜಿಗೆ ಕೊಡಲಿ..?) ಎಂಬ ಷೋ ಪ್ರಾರಂಭಿಸಿದ್ದಾರೆ. ಇಲ್ಲಿ ನಿಮ್ಮನ್ನ ಮೊಸ ಮಾಡಿದ ನಿಮ್ಮ  ಮಾಜಿ ಪ್ರೇಯಸಿ/ಪ್ರಿಯಕರನ ಮೇಲೆ ನೀವು ಸೇಡು ತೀರಿಸಿಕೊಳ್ಳುವ ಅವಕಾಶ ನೀಡಲಾಗುತ್ತೆ. ಒಂದು ಸಮಯದಲ್ಲಿ ನೀನೇ ನನ್ನ ಪ್ರಾಣ .. ಎಂದೆಲ್ಲಾ ಹಲುಬಿದ್ದ ಸಂಗಾತಿಗೆ ಚಿತ್ರ-ವಿಚಿತ್ರ ಬಗೆಯ ಕಿರುಕುಳ ಕೊಡುವುದರ ಮೂಲಕ ನಿಮ್ಮ ನೋವನ್ನ ಬದುಕಿನ ಪುಟಗಳಿಂದ ಅಳಿಸಿಕೊಳ್ಳಬಹುದು?!! Continue reading

ಲೂಸಿಯಾ ಮತ್ತು ಆಧುನಿಕ ಬದುಕಿನ ಹಳವಂಡಗಳು

Standard

 ಕಳೆದ ಒಂದು ದಶಕದಲ್ಲಿ ಬೆಂಗಳೂರಿನ ಜನಸಂಖ್ಯೆ ಸುಮಾರು ೪೬ ಪ್ರತಿಶತ ಹೆಚ್ಚಿದೆ. ಐವತ್ತುಲಕ್ಷದ ಆಸುಪಾಸಿನಲ್ಲಿದ್ದ ಬೆಂಗಳೂರಿನ ಜನಸಂಖ್ಯೆ ಈಗ ಹತ್ತಿರ ಹತ್ತಿರ ಒಂದು ಕೋಟಿ ದಾಟಿದೆ.ಹೊರ ರಾಜ್ಯಗಳಿಂದ ಮಾತ್ರವಲ್ಲದೇ, ರಾಜ್ಯದ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಯವಿದ್ಯಾವಂತ ಯುವಕರು ಬೆಂಗಳೂರನ್ನೇ ಕರ್ಮಭೂಮಿಯಾಗಿ ನೆಚ್ಚಿಕೊಂಡಿದ್ದಾರೆ. ಭಾರತದಉದಾರ ಆರ್ಥಿಕ ವ್ಯವಸ್ಥೆ ಮತ್ತು ಐಟಿ ವ್ಯಾಪಾರದ ವಿಸ್ತಾರ ಈ ಬೆಳವಣಿಗೆಯ ಹಿಂದಿದೆ ಎಂಬುದುನಮಗೆಲ್ಲ ತಿಳಿದಿರುವಂತಹದ್ದೇ. ಹೀಗೆ ಚಿಕ್ಕ ಚಿಕ್ಕ ಊರುಗಳಿಂದ ಬಂದು ಇಲ್ಲಿ ದುಡಿಯುತ್ತಿರುವನೌಕರ ವರ್ಗ ಒಂದು ಬಗೆಯ ಹೋಮ್ ಸಿಕ್ ನೆಸ್ ನಿಂದ ಬಳಲುತ್ತಿದೆ. ಕಳೆದು ಹೋದ ಬಾಲ್ಯ,ಊರು, ಪೋಷಕರು ಒಂದು ಕಡೆ ಕಾಡಿದರೆ , ಅಪಾರವಾದ ಅವಕಾಶ , ಹಣ, ಕನಸುಗಳನ್ನಕಟ್ಟಿಕೊಡುವ ನಗರ ಜೀವನ ಇನ್ನೊಂದು ಕಡೆ. ಇವುಗಳ ಮಧ್ಯೆ ಹಳೆಯ ಹಳವಂಡಗಳನ್ನುನೆನೆಯುತ್ತ ಒಂದು ಬಗೆಯ ರೋಮ್ಯಾಂಟಿಕ್ ಭ್ರಮೆಗಳಲ್ಲಿ ಮುಳುಗಿರುವ ಯುವಜನತೆಬೆಂಗಳೂರಿನಲ್ಲಿದೆ. ಅಭದ್ರತೆ ಮತ್ತು ಒತ್ತಡದ ಕೆಲಸದ ನಡುವೆ ಫೇಸ್ ಬುಕ್, ಟ್ವಿಟರ್ ನಲ್ಲಿಹಳೆಯ ದಿನಗಳನ್ನ ನೆನೆಯುತ್ತ ಒದ್ದಾಡುವ ಇಂತಹ ಯುವಸಮುದಾಯದ ನಡುವಿನಿಂದ ಎದ್ದುಬಂದ ಸಿನೆಮಾ ಲೂಸಿಯಾ.

ಪ್ರೇಕ್ಷಕರೇ ಹಣ ಹಾಕಿ ಮಾಡಿದ ಸಿನೆಮಾ ಎಂದು ಹಣೆಪಟ್ಟಿಕೊಂಡು ಬಿಡುಗಡೆಯಾದ ಈಚಿತ್ರ ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದು ಮಾತ್ರವಲ್ಲದೇ,ಬಾಕ್ಸ್ ಆಫಿಸಿನಲ್ಲಿ ಹಣವನ್ನೂ ಬಾಚಿಕೊಂಡಿತು. ಜನಪ್ರಿಯವಾಗುವುದರ ಜೊತೆಗೆಇಂಗ್ಲೀಷಿನ ಇನ್ಸೆಪ್ಷನ್ ನಂತಹ ಚಿತ್ರಗಳೊಂದಿಗೆ ಇದನ್ನ ಹೋಲಿಸಲಾಯಿತು. ಕನ್ನಡದಇದುವರೆಗಿನ ಶ್ರೇಷ್ಠ ಚಿತ್ರ ಲೂಸಿಯಾ ಎನ್ನುವಷ್ಟರ ಮಟ್ಟಿಗೆ ಸಾಮಾಜಿಕಜಾಲತಾಣಗಳಲ್ಲಿ ಇದರ ಜನಪ್ರಿಯತೆ ಹರಿದಾಡಿತು.

ಲೂಸಿಯಾ ಸಂಪೂರ್ಣವಾಗಿ ಚಿತ್ರೋದ್ಯಮದ ಹೊರಗಿನಿಂದ ಸಮುದಾಯವೊಂದರಿಂದ ಹುಟ್ಟಿಬಂದ ಚಿತ್ರವೆನ್ನುವುದಕ್ಕೆ ನನ್ನಆಕ್ಷೇಪಣೆ ಇದೆ. ಯಾವುದೇ ಉದ್ಯಮದ ಮೂಲ ಉದ್ದೇಶ ಲಾಭ. ಇಲ್ಲಿ ಕಲೆಯೆಂಬುದು ಗೌಣ. ಹೊರಗೆ ಮಾಧ್ಯಮಗಳಲ್ಲಿಕಲಾಸೇವೆ, ಕನ್ನಡ ಸೇವೆ ಎಂದು ಸಿನೆಮಾ ಉದ್ಯಮಿಗಳು ಬಡಕೊಂಡರೂ ಅದೊಂದು ಮಾರ್ಕೆಟಿಂಗ್ ಸ್ಟ್ರಾಟರ್ಜಿ ಎಂಬುದುಸರಳವಾದ ವಿಷಯ. ಪ್ರತಿ ಉದ್ಯಮವೂ ತನ್ನದೇ ಅರ್ಥದಲ್ಲಿ ಮಾರುಕಟ್ಟೆಯನ್ನ ವಿಶ್ಲೇಷಿಸಿಕೊಂಡು ಸಿನೆಮಾ ನಿರ್ಮಾಣಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುತ್ತದೆ. ಈ ವಿಶ್ಲೇಷಕರಿಗೆ, ಉದ್ಯಮಿಗಳಿಗೆ ಪವನ್ ಕುಮಾರ್ ರ ಹೊಸ ಉತ್ಪನ್ನದ ಬಗ್ಗೆ ಆಸಕ್ತಿಇಲ್ಲವಾಗಿ ಪವನ್ ನೇರವಾಗಿ ಗ್ರಾಹಕರ ಮೊರೆ ಹೋಗಿದ್ದಾರೆ. ಇಲ್ಲಿ ಹಣ ಹೂಡಿರುವ ಗ್ರಾಹಕರು ಕೂಡ ಪವನ್ ಕುಮಾರಹಿಂದಿನ ಉತ್ಪನ್ನಗಳ ಗುಣಮಟ್ಟವನ್ನ ಮೆಚ್ಚಿಕೊಂಡವರೇ. ಹಾಗಾಗಿ ಉದ್ಯಮದೊಳಗೊಬ್ಬ ಹುಟ್ಟಿಕೊಂಡಿರುವ ರೆಬೆಲ್ಬಂಡವಾಳಕ್ಕಾಗಿ ಗ್ರಾಹಕನ ಮೊರೆ ಹೋಗಿದ್ದಾನೆ ಎಂಬುದಾಗಿ ಇದನ್ನ ಅರ್ಥೈಸಬೇಕೇ ಹೊರತು ಇಡೀ ಚಿತ್ರೋದ್ಯಮವನ್ನ ಎದುರುಹಾಕಿಕೊಂಡಿದ್ದಾನೆ ಎನ್ನುವುದು ಸರಿಯಲ್ಲ. ಮುಂದೆ ಬಿಡುಗಡೆಯಾದ ಮೇಲೆ ಈ ಚಿತ್ರವೂ ಮುಖ್ಯವಾಹಿನಿಯೊಳಗೇ ಸೇರಿಕೊಂಡುಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದನ್ನಿಲ್ಲಿ ಸ್ಮರಿಸಬಹುದು.ಹಾಗಾಗಿ ಇದು ತೀರಾ ಬುದ್ದಿವಂತಿಕೆಯಿಂದ, ವಿನೂತನ ಉಪಾಯ(Idea) ಗಳನ್ನ ಬಳಸಿ ತಯಾರಾಗಿರುವ ಸಿನೆಮಾ ಆಗಿದೆಯೇ ಹೊರತು, ಸಮುದಾಯದಿಂದ ಹುಟ್ಟಿಬಂದ ಪರ್ಯಾಯಸಿನೆಮಾ ವ್ಯವಸ್ಥೆಯಲ್ಲ. Continue reading

ಶಾಂಘೈ-ಈ ಕ್ಷಣದ ನಮ್ಮ ತಲ್ಲಣವನ್ನ ಹಿಡಿದಿಡುವಂತಹ ಚಿತ್ರ

Standard

Shanghai

೭೦ ರ ದಶಕ ನಮ್ಮ ಸ್ವಾತಂತ್ರ್ಯದ ಕನಸುಗಳು ಭಗ್ನಗೊಂಡ ಕಾಲ. ಅದರ ಜೊತೆಗೆ ಹುಟ್ಟಿಕೊಂಡ ನಿರುದ್ಯೋಗ, ಬಡತನದಂತಹ ಸಮಸ್ಯೆಗಳು ಸಾಮಾನ್ಯನನ್ನು ಹೈರಾಣನನ್ನಾಗಿ ಮಾಡಿದ್ದವು. ನೆಹರೂ ಆದರ್ಶ ಕಮರಿ ಹೋಗಿ ಸಮಾಜವಾದದತ್ತ ಒಲವು ಹೆಚ್ಚಾಗಿದ್ದ ದಿನಗಳು. ಸರಿ ಸುಮಾರು ಈ ಹೊತ್ತಿನಲ್ಲಿಯೇ ಭಾರತೀಯ ಚಿತ್ರರಂಗದಲ್ಲಿ ಆಂಗ್ರಿ ಯಂಗ್ ಮ್ಯಾನ್ ನ ಪ್ರವೇಶವಾಯಿತು ಎನ್ನಬಹುದು. ದೀವಾರ್ ನ ಅಮಿತಾಭ್ ಜನಪ್ರಿಯ ಸಿನೆಮಾಗಳ ಮೊದಲ ಆಂಗ್ರಿ ಯಂಗ್ ಮ್ಯಾನ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು.

ಬಾಲಿವುಡ್ ನ ಜನಪ್ರಿಯ ಸಿನೆಮಾಗಳ ಭಾಷೆಯನ್ನೇ ಬದಲಿಸಿದ ಚಿತ್ರ ದೀವಾರ್. ವ್ಯವಸ್ಥೆಯ ಪರ-ವಿರೋಧಿ ನೆಲೆಯನ್ನು ಶಶಿಕಪೂರ್ ಮತ್ತು ಅಮಿತಾಭ್ ರ ಪಾತ್ರಗಳ ಮೂಲಕ ಕಟ್ಟಿದ್ದ ಈ ಚಿತ್ರ ಸಹಜವಾಗಿ ವ್ಯವಸ್ಥೆಯಿಂದ ವಂಚಿತನಾದ ಅಮಿತಾಭ್ ನ ಮೇಲೆ ಹೆಚ್ಚಿನ ಅನುಕಂಪವನ್ನ ಸುರಿಸಿತ್ತು. ಸಾಮಾನ್ಯನ ಆಕ್ರೋಶವನ್ನ ತೆರೆಯ ಮೇಲೆ ಹಸಿ ಹಸಿಯಾಗಿ ತೋರಿಸಿದ ಈ ಚಿತ್ರದ ಛಾಪು ೯೦ ರ ದಶಕದವರೆಗೂ ಬಾಲಿವುಡ್ ನ ಇತರ ಚಿತ್ರಗಳಿಗೂ ಆಕ್ರಮಿಸಿಕೊಂಡಿತ್ತು.

೯೦ ರ ದಶಕದಲ್ಲಿ ಅರ್ಥವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಕ್ಯಾಪಿಟಲಿಸಂಗೆ ತನ್ನನ್ನು ತೆರೆದುಕೊಂಡ ಭಾರತ ಉದಾರೀಕರಣವನ್ನ ಬಿಗಿದಪ್ಪಿಕೊಂಡಿತು. ಮನಮೋಹನ್-ನರಸಿಂಹ್ ರಾವ್ ರ ಹೊಸ ಆರ್ಥಿಕ ನೀತಿ ಭಾರತವನ್ನ ಸಮಾಜವಾದಿ ಕನಸಿನಿಂದ ಉದಾರವಾದೀ ಅರ್ಥವ್ಯವಸ್ಥೆಯತ್ತ ಕೊಂಡೊಯ್ದಿತು. ಇದರ ಪರಿಣಾಮವೆಂಬಂತೆ ಬಾಲಿವುಡ್ ನಲ್ಲಿ ಕೂಡ ಬದಲಾವಣೆಯ ಗಾಳಿ ಬೀಸಿ ಆಂಗ್ರಿ ಯಂಗ್ ಮ್ಯಾನ್ ಜಾಗದಲ್ಲಿ ’ಹಮ್ ಆಪ್ ಕೇ ಹೈ ಕೌನ್’, ’ದಿಲ್ವಾಲೇ ದುಲಃನಿಯಾ ಲೇ ಜಾಯೆಂಗೆ’ಯಂತಹ ಅರಿಸ್ಟೋಕ್ರಾಟಿಕ್ ಮಧ್ಯಮ ವರ್ಗದ ಸಿನೆಮಾಗಳು ಜನಪ್ರಿಯವಾದವು.

ಕಾಲಚಕ್ರ ಇದೀಗ ಮತ್ತೆ ತಿರುಗಿದೆ. ಉದಾರವಾದೀ ಆರ್ಥಿಕ ನಿಲುವುಗಳ ಫಲ ಈಗ ಅನುಭವಿಸುತ್ತಿದ್ದೇವೆ. ಅಸಮಾನ ಆರ್ಥಿಕ ವ್ಯವಸ್ಥೆ, ಅಭಿವೃದ್ದಿಯಲ್ಲಿನ ಅಸಮತೋಲನ, ಕೋಟಿ ಮೊತ್ತವನ್ನ ಮೀರಿಸುವಂತಹ ಹಗರಣಗಳು, ಏರುತ್ತಿರುವ ಹಣದುಬ್ಬರ, ಕುಸಿಯುತ್ತಿರುವ ರೂಪಾಯಿ, ಇದರೊಳಗೊಬ್ಬ ಹುಟ್ಟಿಕೊಂಡ ಅಣ್ಣಾ ಹಜಾರೆ, ಚಳುವಳಿಯಾಗದೇ ಕೇವಲ ಫೇಸ್ ಬುಕ್ಕುಗಳಲ್ಲಿ ನೀರಾಗಿ ಹೋದ ಸಾಮಾಜಿಕ ಕ್ರಾಂತಿ, ಯಾವುದು ಅಭಿವೃದ್ಧಿ? ಯಾವುದು ಹೋರಾಟ? ಕ್ರಾಂತಿ, ಚಳುವಳಿಗಳಲ್ಲಿ ನಾವು ನಂಬಿಕೆ ಕಳೆದುಕೊಂಡುಬಿಟ್ಟಿದ್ದೇವೆ. ಮತ್ತೊಬ್ಬ ಆಂಗ್ರಿ ಯಂಗ್ ಮ್ಯಾನ್ ನ ಮೇಲೆ ನಮಗ್ಯಾರಿಗೂ ಭರವಸೆ ಉಳಿದಂತಿಲ್ಲ.

ಸರ್ಕಾರವೇ ಭ್ರಷ್ಟತೆಗೇ ಇಳಿಯುತ್ತಿರುವ ಈ ದಿನಗಳಲ್ಲಿ ಬಾಲಿವುಡ್ ನ ಅಚ್ಚರಿ ಎನ್ನುವಂತೆ ಬಂದ ಚಿತ್ರ “ಶಾಂಘೈ”. Continue reading

ಸ್ವಪ್ನ ಸಾಮ್ರಾಜ್ಯ

Standard

Img1ಅವರು ಬಂದರು. “ನಾವು ಕನಸುಗಳನ್ನು ಮಾರುತ್ತೇವೆ ” ಎಂದರು.
ನಾನು ಸುಮ್ಮನಿದ್ದೆ. ಅವರು ಗುಂಪು ಗುಂಪಾಗಿ ಬಂದರು, “ಕನಸುಗಳು ಮಾರಾಟಕ್ಕಿವೆ” ಎಂದರು.
ನಾನು ಹೆದರಿದೆ. “ಕನಸುಗಳನ್ನೂ ಮಾರಲಾಗುತ್ತದೆಯೇ?”. ಅವರು ನಕ್ಕರು. ನಿಂತಿದ್ದ ನನ್ನನ್ನು ಎಳೆದೊಯ್ದು ಕೂರಿಸಿದರು. ಅಲ್ಲಿ
“ನೋಡು ಎಂದು” ಎಲ್ಲೋ ಕೈ ತೋರಿಸಿದರು. ನನಗೇನೂ ಕಾಣಲಿಲ್ಲ.
ಅವನನ್ನ ನೋಡು ಎಂದರು. ನೋಡಿದೆ. “ಕನಸನ್ನ ಕೊಂಡು ಹೇಗೆ ಖುಷಿಯಾಗಿದ್ದಾನೆ, ನೋಡು” ಎಂದರು. ಹೌದು, ಅವನು ನಗುತ್ತಿದ್ದ. ಮಾತು ಮಾತಿಗೂ ನಗುತ್ತಿದ್ದ. ಆತ ಖುಷಿಯಾಗಿದ್ದಾನೆ ಅನ್ನಿಸಿತು.
“ಹೇಳು ಯಾವ ಕನಸು ಬೇಕು ಎಂದು”
ನನಗೆ ಕನಸಿನ ಹಂಗಿಲ್ಲ. ಕನಸುಗಳು ಬೇಕಿಲ್ಲ.
ಫಕ ಫಕನೆ ನಕ್ಕರು. ಇನ್ನೂ ಜೋರಾಗಿ ನಕ್ಕರು. ಅಯ್ಯೋ ಮೂರ್ಖ ಶಿಖಾಮಣಿ. ಕನಸಿಲ್ಲದೇ ಬದುಕಲಾದೀತೆ? Continue reading

ಆಡುಕಳಂ ಸಿನೆಮಾ ಕುರಿತು

Standard

Aadukalamಒಂದು ಸಿನೆಮಾದ ಬಗ್ಗೆ ಮಾತನಾಡುವಾಗ ಅದರ ಕಥೆಯನ್ನ ಹೇಳಿದರೆ ಏನನ್ನೂ ಹೇಳಿದಂತಾಗುವುದಿಲ್ಲ. ಅಕ್ಷರಕ್ಕೆ ದಕ್ಕುವಷ್ಟು ಸಿನೆಮಾ ಸರಳವಾಗಿಬಿಟ್ಟರೆ ಅದು ಸಿನೆಮಾದ ದೊಡ್ಡ ಸೋಲು. ಕಲೆಯ ಮೂಲದ್ರವ್ಯ ಅದು ಕಟ್ಟಿಕೊಡುವ ಅನುಭವದಲ್ಲಿರುತ್ತದೆ. ಯಾಕೆ ಹೆಚ್ಚಿನ ಸಿನೆಮಾಗಳು ನಮಗೆ ಪ್ರಿಯವಾಗುವುದಿಲ್ಲವೆಂದರೆ ದೃಶ್ಯಗಳು ಅನುಭವವಾಗದೇ ಕೇವಲ ವಿವರಗಳಲ್ಲಿ ಸೊರಗಿ ಹೋಗುವುದರಿಂದ. ಚಲಿಸುವ ದೃಶ್ಯಗಳು ಅದರ ರನ್ ಟೈಮ್ ನಲ್ಲಿ ಕಟ್ಟಿಕೊಡುವ ಪರಿಸರ ಗಟ್ಟಿಯಾದಷ್ಟು ಸಿನೆಮಾ ಪ್ರೆಕ್ಷಕನ ಆಳಕ್ಕೆ ಇಳಿಯುತ್ತದೆ. ಹೀಗೆ ದೃಶ್ಯದಿಂದ ದೃಶ್ಯಕ್ಕೆ ಹೊಸ ಅರ್ಥಗಳನ್ನ ಹೊಳೆಯಿಸುತ್ತ ಸಾಗುವ ಅಪೂರ್ವ ಕಲಾಕೃತಿ ವೆಟ್ಟಿಮಾರನ್ ರ ಆಡುಕಳಮ್. ತನ್ನ ಹಿಂದಿನ ಚಿತ್ರದಲ್ಲಿ ಪಲ್ಸರ್ ಬೈಕ್ ನ ಮೋಹಕ್ಕೆ ಬಿದ್ದು ಒದ್ದಾಡುವ ಬಡ ಯುವಕನ ಕಥಾನಕವನ್ನು ವಿಶಿಷ್ಟ ರೀತಿಯಲ್ಲಿ ಹೆಣೆದಿದ್ದ ವೆಟ್ರಿಮಾರನ್ ಈ ಚಿತ್ರದಲ್ಲಿ ಆರಿಸಿಕೊಂಡದ್ದು ಮದುರೈ ಸುತ್ತಮುತ್ತಲು ಗಾಢವಾಗಿ ಹಬ್ಬಿರುವ ಕೋಳಿ ಅಂಕದ ಕಥೆಯನ್ನ.

ವೆಟ್ಟಿಕಾರನ್ ಕೋಳಿ ಕಟ್ಟದಲ್ಲಿ ಪಂಟನಂತವನು. ವರುಷಗಳಿಂದ ಈ ಆಟದಲ್ಲಿ ಮುಂಚೂಣಿಯಲ್ಲಿರುವ ಈತ ಸೋಲಿನ ರುಚಿ ನೋಡಿರುವುದೇ ಕಡಿಮೆ. ಅದರಲ್ಲೂ ರತ್ನಸ್ವಾಮಿಗೆ ಪೆಟ್ಟಿಕಾರನ್ ನನ್ನು ಕೋಳಿಕೊಟ್ಟದಲ್ಲಿ ಒಂದು ಬಾರಿಯೂ ಸೋಲಿಸಲಾಗಿಲ್ಲ. ಇನ್ಸ್ಪೆಕ್ಟರ್ ರತ್ನಸಾಮಿಗೆ ಕೋಳಿ ಕಟ್ಟ ಪ್ರತಿಷ್ಠೆಯ ಪ್ರಶ್ನೆ. ಹಣ್ಣು ಹಣ್ಣು ಮುದುಕಿಯಾಗಿರುವ ಆಕೆಯ ತಾಯಿಯ ಬಯಕೆಯೂ ಕೋಳಿ ಅಂಕದಲ್ಲಿ ಮಣ್ಣಾಗಿರುವ ತನ್ನ ಮನೆತನದ ಪ್ರತಿಷ್ಠೆಯನ್ನ ಮರಳಿ ತರುವುದು. ಒಂದು ವಿಚಿತ್ರ ಸನ್ನಿವೇಶದಲ್ಲಿ ವೆಟ್ಟಿಕಾರನ್ ಮತ್ತು ರತ್ನಸ್ವಾಮಿಯ ಮಧ್ಯೆ ಪಂದ್ಯವೇರ್ಪಡುತ್ತದೆ. ಮೊದಲ ಸುತ್ತಿನಲ್ಲಿ ವೆಟ್ಟಿಕಾರನ್ ತಂಡದ ಕೋಳಿ ಸೋಲನುಭವಿಸಿದ ಬಳಿಕ, ವೆಟ್ಟಿಕಾರನ್ ಜಗಳಕ್ಕೆ ಅನರ್ಹಕ್ಕೆಂದು ತಿರಸ್ಕರಿಸಿದ್ದ ಕೋಳಿಯನ್ನಿಟ್ಟುಕೊಂಡೇ ಆತನ ಶಿಷ್ಯ ಕುರುಪ್ಪಾನ್ ರತ್ನಸ್ವಾಮಿಯನ್ನು ಮೂರುಬಾರಿ ಸೋಲಿಸುತ್ತಾನೆ. Continue reading

ಬಿಗ್ ಬಾಸ್ ಎಂಬ ಮನೆ ಮುರುಕ ಆಟ

Standard

Big Boss

ಸರಿ ಸುಮಾರು ೨೦ ವರ್ಷಗಳ ಹಿಂದೆ. ಮನೆಯಲ್ಲಿ ಯಾರ ಮಾತನ್ನೂ ಕೇಳದ ಹಠಮಾರಿ ಚಿಕ್ಕಪ್ಪನನ್ನು , ಕುಟುಂಬದ ಯಜಮಾನ ನಮ್ಮ ತಾತ ಮನೆಯಿಂದ ಹೊರ ಹೋಗಲು ಹೇಳಿದ್ದರು. ಬಹುಷಃ ಅದ್ಯಾವುದೋ ಅಮವಾಸ್ಯೆಯ ರಾತ್ರಿಯೇ ಇರಬೇಕು. ಮನೆಯಲ್ಲಿ ದೊಡ್ಡ ರಂಪಾಟ. ಗಲಾಟೆ, ಚೀರಾಟ. ತೆರೆದೇ ಇದ್ದ ಮನೆಯ ಬಾಗಿಲು. ಹೊರಗಿನಿಂದ ಇಣುಕಿ ನೋಡುತ್ತಿರುವ ಕೇರಿಯ ಮಂದಿ. ನಾವಿನ್ನೂ ಆಗ ಚಿಕ್ಕವರು, ಕೇರಿ ಮಂದಿಯ ಮುಂದೆ ಮರ್ಯಾದೆ. ತಾತನ ರೌದ್ರಾವತಾರ ನೋಡಿ ಭಯ. ಆತ ಮನೆಯ ಬಿಗ್ ಬಾಸ್. ಆತನನ್ನ ಎದುರು ಹಾಕಿಕೊಂಡು ಮನೆಯಲ್ಲಿರುವುದುಂಟೇ..?

ಇಂದು ಕೂಡು ಕುಟುಂಬಗಳಿಲ್ಲ. ಯಜಮಾನಿಕೆಯ ಭಯವಿಲ್ಲ. ನಾವಿಬ್ಬರು-ನಮಗೊಬ್ಬ ಎಂಬ ಸಂಸಾರ ಸೂತ್ರ. ಯಾರ ಮಾತು ಯಾರೂ ಕೇಳಬೇಕೆಂದಿಲ್ಲ. ನಮ್ಮ ಕೌಟುಂಬಿಕ ಚಿತ್ರ ಬದಲಾಗಿದೆ. ಆದರೂ ಕೂಡು ಕುಟುಂಬದ ಹಳೆ ನೆನಪುಗಳೂ, ಹಳವಂಡಗಳನ್ನ ಆಗಾಗ ನೆನೆಯುತ್ತಲೇ ಇರುತ್ತೇವೆ.
ಈಗೇನಿದ್ದರೂ ಪ್ರಚ್ಛನ್ನ ವಾಸ್ತವದ ಕಾಲ. ಹಿಂದೆ ಸಾಯಂಕಾಲ ಅರಳಿಕಟ್ಟೆಯಲ್ಲೋ, ಇಲ್ಲ ಮನೆ ಮುಂದಿನ ಸಿಮೆಂಟಿನ ಕಟ್ಟೆಗಳಲ್ಲೋ ಹರಟೆ ಕೊಚ್ಚುತ್ತಿದ್ದೆವು. ಈಗೇನಿದ್ದರೂ ಅದು ಫೇಸ್ ಬುಕ್ಕಿನಲ್ಲಿ ಮಾತ್ರ. ಒಟ್ಟಿಗೆ ಕಾಲ ಕಳೆಯುವ ಕೂಡು ಕುಟುಂಬದ ಪರಿಕಲ್ಪನೆ ಏನಿದ್ದರೂ ಇನ್ನು ಬಿಗ್ ಬಾಸ್ ನಲ್ಲಿ ಮಾತ್ರ. ನೆದರ್ಲ್ಯಾಂಡಿನ ಬಿಗ್ ಬ್ರದರ್, ಹಿಂದಿ ವಾಹಿನಿಗಳಲ್ಲಿ ಬಿಗ್ ಬಾಸ್ ಆಗಿ ಕನ್ನಡಕ್ಕೀಗ ಕಾಲಿಟ್ಟಿದೆ.

ಬಿಗ್ ಬ್ರದರ್ ಮೂಲತಃ ಜಾನ್ ಡೇ ಮೋಲ್ ಎಂಬ ಮಾಧ್ಯಮ ಉದ್ಯಮಿ ಸೃಷ್ಟಿಸಿದ ರಿಯಾಲಿಟಿ ಗೇಮ್. ಬಿಗ್ ಬ್ರದರ್ ಎಂಬ ಶೀರ್ಷಿಕೆ ಈತ ಎತ್ತಿಕೊಂಡಿದ್ದು ಜಾರ್ಜ್ ಆರ್ವೇಲ್ ನ ಕ್ಲಾಸಿಕ್ ಕಾದಂಬರಿ ’೧೯೮೪’ ರಿಂದ. ಸರ್ವಾಧಿಕಾರಿ ಧೋರಣೆಯುಳ್ಳ ವ್ಯವಸ್ಥೆಯ ವಿರುದ್ಧ ವ್ಯಂಗ್ಯವಾಡುವ ಈ ಕಾದಂಬರಿಯ ಮುಖ್ಯ ಪಾತ್ರವೇ ಬಿಗ್ ಬ್ರದರ್. ಕನ್ನಡದ ಸಂದರ್ಭದಲ್ಲಿ ಬಿಗ್ ಬಾಸ್ ಎಂಬ ಪದ ತೇಜಸ್ವಿಯವರ ಜುಗಾರಿ ಕ್ರಾಸ್ ಓದಿದ್ದರೇ ನಿಮಗೆ ನೆನಪಿರುತ್ತದೆ. ಇದಕ್ಕೂ , ನಮ್ಮ ರಿಯಾಲಿಟಿ ಶೋ ಬಿಗ್ ಬಾಸ್ ಗೂ ಸಂಬಂಧವಿಲ್ಲದಿದ್ದರೂ ಸಾಂದರ್ಭಿಕವಾಗಿ ನೆನಪಿಸಿಕೊಂಡಿದ್ದೇನಷ್ಟೇ. Continue reading

ಚೆಕ್ ಮೇಟ್..?

Standard

Chess_king_and_pawns

ಅರ್ಧ ಮಾತ್ರ ಉಳಿದಿದ್ದ ಡಯಟ್ ಕೋಕ್ ನ ಟಿನ್ನನ್ನು ಇನ್ನೊಮ್ಮೆ ಬಾಯಿಗಿಟ್ಟುಕೊಂಡಾಗ ಕೇತುವಿಗೆ ಅದು ತನ್ನ ರುಚಿ ಬಿಟ್ಟು ಕೊಟ್ಟಿರುವುದು ಅರಿವಿಗೆ ಬಂತು. ಮತ್ತೆ ಇಟ್ಟರೆ ಕುಡಿಯಲೇ ಆಗದೇನೋ ಎಂದು ಒಂದೇ ಏಟಿಗೆ ಉಳಿದದ್ದನ್ನೆಲ್ಲಾ ಕುಡಿದು ಮುಗಿಸಿ ನಸೀರ್ ಪಾನ್ ಏನಾದರೂ ಮೂವ್ ಮಾಡಿದನೋ ಎಂದು ನೋಡಿದ. ತಾನು ಹಿಂದಿನ ನಡೆ ನಡೆಸಿದಾಗಲೇ ಕೇತುವಿಗೆ ತನ್ನ ಗೆಲುವು ಖಾತ್ರಿಯಾಗಿತ್ತು. ಎಂಟು ವರ್ಷಗಳಿಂದ ಆತ ಹಪ ಹಪಿಸುತ್ತಿದ್ದ ಕ್ಷಣ ಅದು. ಇಪ್ಪತ್ತು ನಿಮಿಷವಾದರೂ ತನ್ನ ನಡೆಗೆ ಎದುರುತ್ತರ ಕೊಡಲಾಗದೇ ನಸೀರ್ ಒದ್ದಾಡುತ್ತಿದ್ದಾಗಲೇ ಇನ್ನೆರಡು ನಡೆಗಳಲ್ಲಿ ಕೇತುವಿಗೆ ಆಟ ಮುಗಿಯಬಹುದಾದ ಸಾಧ್ಯತೆ ಹೊಳೆಯಿತು. ಸೈಲೆಂಟ್ ಮೋಡಿನಲ್ಲಿ ಇಟ್ಟಿದ್ದ ತನ್ನ ಮೊಬೈಲಿನಲ್ಲಿ ಬಂದು ಬಿದ್ದಿರಬಹುದಾದ ಮೆಸೆಜ್ ಗಳನ್ನೆಲ್ಲಾ ಡಿಲಿಟ್ ಮಾಡತೊಡಗಿದ.

ಹಳದಿ ಬಣ್ಣದ ಬಿದಿರಿನ ಚಾಪೆಯ ಮೇಲೆ ಹರಡಿ ಹಂಚಿ ಹೋಗಿದ್ದ ಬೆಂಗಳೂರ್ ಟೈಮ್ಸ್, ಮೊಬೈಲ್ ಚಾರ್ಜರ್, ಇನ್ನೂ ವಾರದ ನೀರು ಕಾಣದ ಬಟ್ಟೆಗಳು ಇವುಗಳ ನಡುವೆ ಆಗಾಗ ಚಕ್ಕಳಮಟ್ಟೆ ಹಾಕುತ್ತ, ಕಾಲು ಅಗಲ ಮಾಡುತ್ತ ವಿಚಿತ್ರ ಚಡಪಡಿಕೆಯಲ್ಲಿ ನಸೀರ್, ಕೇತು ಬಿಷಪ್ ನನ್ನು ಮುಂದೆ ಬಿಟ್ಟು ತನ್ನ ರಾಜನ ಸುತ್ತ ಕೋಟೆ ಕಟ್ಟಿರುವ ಪಾನ್ ಗಳನ್ನೇ ನೋಡುತ್ತಿದ್ದ. ೬೪ ಮನೆಗಳ ಆ ಚದುರಂಗದಲ್ಲಿ ಕೇತು ಚಕ್ರವ್ಯೂಹವನ್ನೇ ಕಟ್ಟಿ ಬಿಟ್ಟಂತಿತ್ತು. ತಾನೇಲ್ಲಿ ಎಡವಿದೆ ಎಂಬುದು ಅರಿವಾಗುವ ಮೊದಲೇ ಆತ ಕೊಟ್ಟಿರುವ ಒಂದೊಂದು ಏಟಿಗೂ ಸಾಕ್ಷಿ ಎಂಬಂತೆ  ಪಾನ್ ಗಳು ಚೆಸ್ ಬೋರ್ಡಿನ ಹೊರಗೆ ಸತ್ತು ಬಿದ್ದಿದ್ದವು. Continue reading